ಸೃಜನಶೀಲ ಹಸಿವಿಗೆ ಮಸೂರದೊಳಗಿನ ಆಹಾರ

Posted by dinesh maneer | December 16, 2016 | KANNADA ARTICLES, recent

[ article published in Prajavani newspaper on 10th July 2016]

ಈಕಲೆಯ ಸೆಳೆತವೇ ಹಾಗೆ! ಎಷ್ಟು ಚಿತ್ರ ತೆಗೆದರೂ ಸಮಾಧಾನವಾಗದ ಭಾವ. ಆಹ್! ಒಳ್ಳೆಯ ಚಿತ್ರ ಬಂದೇಬಂತೆಂಬ ಒಂದು ಕ್ಷಣದ ಸಂಭ್ರಮ ಮರುಕ್ಷಣದಲ್ಲಿ ಠುಸ್ ಎಂದು ಒಡೆದುಹೋದರೂ ಹೋದೀತು. ಅದೆಷ್ಟೋ ದಿನಗಳ ಒಳಗಿನ ತುಮುಲದ ಚಿತ್ರ ಬಾರಲೇ ಇಲ್ಲ ಎಂಬ ಕೊರಗು, ಕೆಲವೊಂದು ಸಲ ಈ ಚಿತ್ರ ನನ್ನ ಹೃದಯ ಮುಟ್ಟಲೇ ಇಲ್ಲ ಎಂಬ ಅಸಮಾಧಾನ – ಎಲ್ಲವೂ ಇಲ್ಲಿ ಸಹಜ.

‘ಈ ಚಿತ್ರಕ್ಕೆ ಕಥೆಯೇ ಇಲ್ಲ’ ಎಂದು ಒಂದು ಸಲ ಅನ್ನಿಸಿದರೆ, ‘ಸಂಯೋಜನೆಯೇ ಇಲ್ಲವಲ್ಲ’ ಎಂಬ ಅಳು ಕೂಡ ಮನಸ್ಸನ್ನು ಆವರಿಸುತ್ತದೆ. ಬೇರೆ ಕೆಲಸದಲ್ಲಿ ತೊಡಗಿಕೊಂಡಾಗಲೂ ಮತ್ತೆ ಮತ್ತೆ ಚಿತ್ರ ಸಂಯೋಜನೆಯ ಯೋಚನೆಗಳೇ ಬರುತ್ತವೆ. ನನ್ನವೇ ಹಳೆಯ ಚಿತ್ರಗಳನ್ನು ನೋಡಿದಾಗ ಪಿಚ್ ಅನ್ನಿಸಿ, ಅಳಿಸಿ ಹಾಕಿಬಿಡಲೇ ಅನ್ನಿಸುವ ಯೋಚನೆ.

ರಘು ರಾಯ್, ರಘುಭೀರ್ ಸಿಂಗ್ ಮೊದಲಾದವರ ಚಿತ್ರಗಳನ್ನು ಮತ್ತೆ ಮತ್ತೆ  ನೋಡಿದಾಗ ಆವರಿಸುವ ಹತಾಶಭಾವ ಮತ್ತು ವಿವಶತೆ ವರ್ಣಿಸಲಾಗದು. ಇಂತಹ ಭಾವತೀವ್ರತೆಗಳು ಬರತೊಡಗಿ ಎರಡು ವರ್ಷಗಳೇ ಸಂದಿವೆ. ಕೆಲವೊಮ್ಮೆ ಈ ಛಾಯಾಚಿತ್ರಗ್ರಹಣ ಯಾಕೆ ಆರಂಭಿಸಿದೆನೋ ಅನ್ನಿಸುತ್ತದೆ.

ಎರಡು ವರ್ಷದ ಹಿಂದೆ ಬದುಕು ಎಷ್ಟು ಸುಂದರವಾಗಿತ್ತು ಅನ್ನಿಸುತ್ತದೆ. ಇದ್ದಿದ್ದು ಸರಳ ಕ್ಯಾಮೆರಾ ಮತ್ತು ಲೆನ್ಸ್‌ಗಳು. ಮುಳುಗುವ ಸೂರ್ಯನ ಬಣ್ಣಗಳನ್ನೋ, ಬೀಳುವ ಮಳೆಯದೋ ಸುಂದರ ಮುಖದ್ದೋ ಚಿತ್ರ ತೆಗೆದರೆ ಸಾಕಾಗಿರುತ್ತಿತ್ತು.ನನ್ನ ಚಿಕ್ಕಪುಟ್ಟ ಕನಸುಗಳೆಲ್ಲವೂ ಛಾಯಾಗ್ರಹಣದ ಫ್ರೇಮಿನೊಳಗೇ ಇರುತ್ತದ್ದವು. ಹೊಸ ಕ್ಯಾಮೆರಾ ಕೊಳ್ಳುವ ಅಥವಾ ಹೊಸ ಲೆನ್ಸ್ ಕೊಳ್ಳುವ ಕನಸುಗಳವು. ಪ್ರಯಾಣದ ಕನಸೊಂದು ಯಾವಾಗಲು ಇತ್ತು, ಈಗಲೂ ಇದೆ. ಆದರೂ ಇಷ್ಟೂ ಸಾಲದು ಎಂಬ ಅಸಮಾಧಾನ ಹುಟ್ಟಿದ್ದು ಇತ್ತೀಚಿಗೆ. ಅದು ಛಾಯಾಗ್ರಹಣದ ಹೊಸ ಸಾಧ್ಯತೆಗಳನ್ನು ಅಲ್ಪ ಸ್ವಲ್ಪ ರುಚಿಸಿದಾಗ.

2010ರಲ್ಲಿ ಛಾಯಾಚಿತ್ರಗ್ರಹಣ ಆರಂಭಿಸಿದಾಗ ನನಗೆ ಮೂವತ್ತಾಗಿತ್ತು. ಇನ್ನೇನಪ್ಪ ಕಲಿಯೋದು ಅಂದುಕೊಳ್ಳುತ್ತಲೇ ಅಲ್ಲೊಂದು ಇಲ್ಲೊಂದು ಚಿತ್ರ ತೆಗೆದಾಗ ಸಿಕ್ಕ ಖುಷಿಯೇ ನನ್ನನ್ನು ಮತ್ತೆ ಕಲಿಯಲು ಪ್ರೇರೇಪಿಸಿತ್ತು. ಇಂಟರ್ನೆಟ್ ಯುಗ ಕಲಿಯುವುದನ್ನು ತುಂಬಾ ಸರಳ ಮಾಡುತ್ತಿದೆ. ಆದರೆ ಜ್ಞಾನಗಳಿಕೆಯ ದಾರಿ ತಪ್ಪಿಸಿಬಿಡುತ್ತದೆ.

ಮುಂದಿನ ಮೂರು ವರ್ಷ ಸತತ ಪ್ರಯತ್ನದಿಂದ ಕ್ಯಾಮೆರಾದ ತಂತ್ರಗಳನ್ನೇನೋ ಕಲಿತೆ. ಆದರೆ ಸಮಾಧಾನವಾಗಲಿಲ್ಲ. ಅಂತರರಾಷ್ಟ್ರೀಯ, ರಾಷ್ಟ್ರೀಯ ಮ್ಯಾಗಜಿನ್‌ಗಳಲ್ಲಿ ಕೆಲವು ಚಿತ್ರಗಳು ಪ್ರಕಟವಾದವು. ಪ್ರದರ್ಶನಗಳೂ ಆದವು. ಅತಿಯಾದ ಸಂತೋಷವಾದರೂ ಅದು ತುಂಬಾ ದಿನಗಳ ಕಾಲ ಉಳಿಯಲಿಲ್ಲ. ಹಳ್ಳಿಗಳನ್ನು ತಿರುಗಿದೆ.

ಪ್ರವಾಸಿತಾಣಗಳನ್ನೆಲ್ಲ ಜಾಲಾಡಿದೆ. ಸ್ವರ್ಗಕ್ಕೆ ಹತ್ತಿರ ಎನಿಸುವ, ಹಿಮಾಲಯದಂತಹ ಜಾಗಗಳನ್ನು ನೋಡಿದೆ. ಮಳೆ–ಚಳಿ ಲೆಕ್ಕಿಸದೆ, ಹಗಲು ರಾತ್ರಿ ಕುಳಿತು ಚಿತ್ರಗಳನ್ನು ತೆಗೆದೇ ತೆಗೆದೆ. ಆದರೆ ಕಲೆಯ ಆಂತರಿಕ ಖುಷಿ  ಇದ್ದಿದ್ದು ಕೆಲವು ದಿನಗಳು ಮಾತ್ರ. ಹಸಿವು ನೀಗಲೇ ಇಲ್ಲ ಎನ್ನುವ ಭಾವ.

ಆಗಲೇ ನನಗೆ ಅನ್ನಿಸಿದ್ದು– ಗುರುವಿನ, ಮಾರ್ಗದರ್ಶಕನ ಅಗತ್ಯವಿದೆ ಎಂದು. ಗುರುಗಳು ಸಿಕ್ಕಿದರು, ಮಾರ್ಗದರ್ಶಕರು ಸಿಕ್ಕಿದರು. ಆಗ ಕಲಿತ ರೀತಿಯೇ ಬೇರೆ. ನನ್ನ ಕಲೆಗೆ ಜ್ಞಾನದ ಕೊರತೆಯಿತ್ತು ಎಂದು ಅನ್ನಿಸಿದ್ದು ಆಗಲೇ. ಪುಸ್ತಕಗಳನ್ನು ಓದತೊಡಗಿದೆ. ಕಲಾವಿದರನ್ನು  ಭೇಟಿ ಮಾಡಿದೆ. ಅವರ ಬಳಿ ಮಾತನಾಡಿದೆ. ಬ್ಲಾಗ್‌ಗಳನ್ನೂ ಬರೆಯಲಾರಂಭಿಸಿದೆ. ಆಗ ದಾರಿ ಎಲ್ಲಿದೆ ಎಂಬುದು ಮನದಟ್ಟಾಗತೊಡಗಿತು. ಆಗಲೇ ಅನ್ನಿಸಿದ್ದು ನನ್ನ ಪಯಣ ಈಗಷ್ಟೇ ಆರಂಭವಾಗಿದೆ ಎಂದು.

ಸಾಹಿತಿಯು ಶಬ್ದಗಳ ಮೂಲಕ, ಸಂಗೀತಗಾರನು ಸ್ವರಗಳ ಮೂಲಕ, ಚಿತ್ರಕಾರನು ಕುಂಚದ ಮೂಲಕ ಅಭಿವ್ಯಕ್ತಿಪಡಿಸುತ್ತಾನೋ ಅದೇ ರೀತಿ ಒಬ್ಬ ಛಾಯಾಚಿತ್ರಕಾರನು ತನ್ನ ಚಿತ್ರಗಳ ಮೂಲಕ ಏನನ್ನೋ ಅಭಿವ್ಯಕ್ತಪಡಿಸಲು ಸಾಧ್ಯ ಅನ್ನಿಸಿತು. ಹೀಗೆ ಅಭಿವ್ಯಕ್ತಗೊಂಡುದು ಸರಳವಾಗಿ ಇನ್ನೊಬ್ಬರಿಗೆ ಅರ್ಥವಾದಾಗ  ಮತ್ತು ಪರಿಣಾಮ ಬೀರಿದಾಗ ಅದು ಒಂದು ಉತ್ತಮ ಕಲೆಯಾಗಲು ಸಾಧ್ಯ.

ಜಗತ್ತು ಕಂಡ ಓರ್ವ ಅತ್ಯದ್ಭುತ ಛಾಯಾಚಿತ್ರಕಾರ ವಿಲಿಯಂ ಎಗ್ಲೆಸ್ಟನ್ ಒಮ್ಮೆ– ‘ಯಾವ ಚಿತ್ರ ತೆಗೆಯಲಿ? ನನ್ನ ಸುತ್ತ ಮುತ್ತ ಕೆಟ್ಟ ವಿಷಯಗಳೇ ತುಂಬಿಕೊಂಡಿದೆ’ ಎಂದು ಹತಾಶರಾಗಿ ಕೇಳಿದಾಗ, ಯಾರೋ– ‘ಕೆಟ್ಟ ವಸ್ತುಗಳನ್ನೇ ತೆಗೆ’ ಅಂದರಂತೆ. ವಿಲಿಯಂ ಅವರ ಚಿತ್ರ ವಸ್ತುಗಳು ತುಂಬಾ ಸರಳವಾದವು ಮತ್ತು ಹೆಚ್ಚಿನವು ಮಾನವ ನಿರ್ಮಿತ ವಸ್ತುಗಳೇ! ಹೀಗೆ ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಅದ್ಭುತ ಛಾಯಾಚಿತ್ರಗ್ರಾಹಕರಿದ್ದಾರೆ. ಆದರೆ ಪ್ರತಿಯೊಬ್ಬರೂ ಇನ್ನೊಬ್ಬರಿಗಿಂಥ ವಿಭಿನ್ನ!

ಸೂರ್ಯ ಮುಳುಗುವಾಗ ಉಂಟಾಗುವ ಅತಿ ಅದ್ಭುತ ಬಣ್ಣಗಳನ್ನು ಚಿತ್ರದಲ್ಲಿ ಸೆರೆಹಿಡಿಯಲು ಉತ್ತಮ ಛಾಯಾಚಿತ್ರಗ್ರಾಹಕನೇ ಬೇಕಾಗಿಲ್ಲ. ಆ ಸಮಯದಲ್ಲಿ ಕ್ಯಾಮೆರಾ ಕೈಯಲ್ಲಿ ಇದ್ದವ ಯಾರಾದರೂ ತೆಗೆಯಬಹುದು. ಆದರೆ ಕೇವಲ ‘ಮನೆ’ಯ ಎದುರು ಒಂದು ಉತ್ತಮ, ಹೃದಯ ಮುಟ್ಟುವ ಛಾಯಾಚಿತ್ರ ತೆಗೆಯಲು ಅತಿ ಉತ್ತಮ ಛಾಯಾಚಿತ್ರಗ್ರಾಹಕನೇ ಬೇಕು.

ಒಬ್ಬ ಉತ್ತಮ ಛಾಯಾಚಿತ್ರಗ್ರಾಹಕನಿಗೆ ಅವಕಾಶಗಳು ಬೇಕಾಗಿಲ್ಲ. ಅವನ ಸೃಜನಶೀಲತೆ ಹಾಗೂ ದೃಷ್ಟಿಕೋನ ಸಾಕು. ಎಂಥ ಸನ್ನಿವೇಶ ಕೊಟ್ಟರೂ ಒಳ್ಳೆಯ ಛಾಯಾಚಿತ್ರ ತೆಗೆಯಬಲ್ಲವನೇ ಒಬ್ಬ ಉತ್ತಮ ಛಾಯಾಚಿತ್ರಗ್ರಾಹಕ. ಇವನ್ನು ಮನಗಂಡಾಗ ನನ್ನ ಛಾಯಾಗ್ರಹಣದ ದೃಷ್ಟಿಕೋನವೇ ಬದಲಾಯಿತು.

ಯಾವಾಗಲೂ ಸುಂದರ ಹಳ್ಳಿಗಳ, ಪ್ರಕೃತಿಯ, ಸೂರ್ಯೋದಯ, ಸೂರ್ಯಾಸ್ತಗಳ  ಚಿತ್ರಗಳನ್ನು ತೆಗೆಯುತ್ತಿದ್ದವನಿಗೆ ಮನೆಯ ಎದುರಿನ ಗಲ್ಲಿಗಳು, ಪಟ್ಟಣದ ಆಗುಹೋಗುಗಳು, ಮನುಷ್ಯ ಸಂಬಂಧಗಳು, ನಮ್ಮ ಸಂಪ್ರದಾಯಗಳು, ಕಲಾವಿದರ ಮುಖಚಿತ್ರಗಳು, ಅವರ ವ್ಯಕ್ತಿತ್ವಗಳು, ಪ್ರಕೃತಿಯಲ್ಲಿನ ಸರಳ ಆಗುವಿಕೆಗಳು ಬಹು ಸುಂದರವಾಗಿ ಕಾಣಿಸಿಕೊಳ್ಳತೊಡಗಿದವು. ಇವು ನನ್ನ ಕಲಾಹಸಿವನ್ನು ನೀಗಿಸತೊಡಗಿ ನನ್ನ ಚಿತ್ರಗಳಿಗೆ ಒಂದು ಸರಳ ಅರ್ಥವನ್ನು ಕೊಡತೊಡಗಿದವು.

ನನ್ನ ಈ ಪಯಣ ಮುಂದುವರೆದಿದೆ…
ಕರ್ನಾಟಕದಲ್ಲಿನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕೆಲವು ವಿಶಿಷ್ಟ ಜನಪದ ಆಚರಣೆಗಳನ್ನು ಚಿತ್ರಗಳ ಮೂಲಕ ಹಿಡಿದಿಡುವ ಪ್ರಯತ್ನ ನಡೆಸಿದ್ದೇನೆ. ಇದೊಂದು ಕ್ಲಿಷ್ಟಕರವಾದ ಮತ್ತು ಸಮಯ ತೆಗೆದುಕೊಳ್ಳುವ ಕೆಲಸ. ಮಾನವ ವಿಕಸನ ಹೊಂದಿದ ರೀತಿ, ಸಮಾಜಗಳ ವಿಕಸನ , ಬುಡಕಟ್ಟು ಜನಾಂಗಗಳು, ಗ್ರಾಮೀಣ ಜೀವನ, ಜನಪದ ಸಂಸ್ಕ್ರತಿ, ಸಾಮಾಜಿಕ ಸ್ಥಿತಿಗತಿಗಳು, ಆಧುನೀಕರಣದ  ಪರಿಣಾಮಗಳು–  ಇವು ನನಗೆ ತುಂಬಾ ಕುತೂಹಲಕರವಾದ ವಿಷಯಗಳು.

ಯಾವುದೊ ಒಂಟಿ ಹಳ್ಳಿಗೆ ಸುಮ್ಮನೆ ಹೋಗಿ ಅಲ್ಲಿಯ ಸಂಸ್ಕೃತಿ, ಆಚರಣೆಗಳನ್ನು ಪರಿಶೋಧಿಸುವುದು, ಚಿತ್ರಗಳನ್ನು ಸೆರೆಹಿಡಿಯುವದು ನನ್ನ ಅತ್ಯಂತ ಇಷ್ಟವಾದ ಸಾಹಸ. ಜಾತ್ರೆಗಳು ಇನ್ನೂ ಇಷ್ಟ. ಕರ್ನಾಟಕದ ಜಾತ್ರೆಗಳು ತುಂಬಾ ವಿಶಿಷ್ಟ ಹಾಗೂ ವೈವಿಧ್ಯಮಯ.

ಪುತ್ತೂರಿನಲ್ಲಿ ನಡೆಯುವ ಜಾತ್ರೆಗೂ ಸವದತ್ತಿಯಲ್ಲಿ ನಡೆಯುವ ಜಾತ್ರೆಗೂ ಎಲ್ಲಿಯೂ ಹೊಂದಾಣಿಕೆಯಾಗದು. ಈ ಆಚರಣೆಗಳ ಹಿಂದಿನ ಅಗಾಧ ಜಾನಪದ ಜ್ಞಾನ, ಅನುಭವಗಳು ಅದ್ಭುತವಾದದ್ದು. ಇವುಗಳನ್ನು ಕೇವಲ ಸಾಕ್ಷ್ಯಚಿತ್ರಗಳನ್ನಾಗಿ ಸೆರೆಹಿಡಿಯುವುದು ತುಂಬಾ ಸುಲಭ. ಆದರೆ ಕಲಾತ್ಮಕವಾಗಿ  ಸೆರೆಹಿಡಿಯುವುದು ತುಂಬ ಕಷ್ಟದ ಕೆಲಸ.

ಕಲಾತ್ಮಕವಾಗಿ ಚಿತ್ರಿಸಿದಾಗ ಅದರಲ್ಲಿ ಸಿಗುವ ಕಲಾತೃಪ್ತಿ ಹಾಗೂ ಚಿತ್ರದ ಪರಿಣಾಮ, ಪ್ರಭಾವ ಹೆಚ್ಚು. ಇಂತಹ ಚಿತ್ರಗಳು ನೋಡುಗರಿಗೂ ಸಂತೋಷವನ್ನು ನೀಡುತ್ತವೆ, ಅವರನ್ನು ಚಿಂತನೆಗೊಳಪಡಿಸುತ್ತವೆ.

ಸಂಗೀತ ಕಲಾವಿದರ ವ್ಯಕ್ತಿಚಿತ್ರಗಳನ್ನು, ಸಂಗೀತದ ಆಗುಹೋಗುಗಳನ್ನು ಚಿತ್ರಿಸುವ ಕೆಲಸವನ್ನು ಇನ್ನೊಂದು ಕಡೆ ನಡೆಸಿದ್ದೇನೆ. ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಕಂಡು ಬರುವ ಸಂಗೀತಗಾರರು ಹಾಗು ಸಂಗೀತದ ಪಯಣ ರೋಮಾಂಚನಕಾರಿಯಾದದ್ದು . ಇಲ್ಲಿ ಕಂಡು ಬರುವ ಶಿಸ್ತು, ಗುರು–ಶಿಷ್ಯ ಪರಂಪರೆಯ ಕಲಿಯುವಿಕೆ ಇನ್ನೆಲ್ಲಿಯೂ ಕಂಡುಬರುವುದಿಲ್ಲ. ಇಂತಹ ಒಂದು ಶ್ರೀಮಂತ ವಿಷಯದಲ್ಲಿ ಕಲಾತ್ಮಕವಾಗಿ ಛಾಯಾಗ್ರಹಣ ಮಾಡುವುದು ಒಂದು ಅದ್ಭುತ ಅನುಭವ.

ನನ್ನ ಮುಂದಿನ – ಬಹುಶಃ ಕೊನೆಯ ಸಾಹಸ, ಪ್ರಯೋಗಶೀಲ ಕೊಲಾಬರೆಟೀವ್ ಛಾಯಾಚಿತ್ರಗ್ರಹಣ. ಅದರ ಬಗ್ಗೆ ಇನ್ನೊಮ್ಮೆ ಪ್ರತ್ಯೇಕವಾಗಿ ಬರೆಯುವುದೇ ಸರಿ. ಅದೊಂದು ಅತಿ ದೀರ್ಘ ಪಯಣವಂತೂ ಹೌದು.

ದಿನೇಶ್  ಹೆಗಡೆ ಮಾನೀರ್ ಉತ್ತರಕನ್ನಡ ಮೂಲದ ಛಾಯಾಚಿತ್ರಗ್ರಾಹಕರು. ಭೂದೃಶ್ಯ (landscape), ನಿಸರ್ಗ ಮತ್ತು ಸಂಸ್ಕೃತಿ ಅವರ ಇಷ್ಟವಾದ ವಿಷಯಗಳು. ಸದ್ಯಕ್ಕೆ ಕರ್ನಾಟಕವನ್ನಷ್ಟೇ ತಮ್ಮ ಕಲಾಕ್ಷೇತ್ರವನ್ನಾಗಿಸಿಕೊಂಡಿದ್ದಾರೆ. ಅವರ ಛಾಯಾಚಿತ್ರಗಳು ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪತ್ರಿಕೆ–ಪುಸ್ತಕಗಳಲ್ಲಿ ಪ್ರಕಟಗೊಂಡಿವೆ, ಹಲವು ಪ್ರದರ್ಶನಗಳನ್ನೂ ಕಂಡಿವೆ. ಗ್ರಾಮೀಣ ಆಚರಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ದಿನೇಶ್ ಹಲವಾರು ಕಡೆಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ಅವರ ಚಿತ್ರಗಳನ್ನು ಹಾಗೂ ಬರಹಗಳನ್ನು  dineshmaneer.comನಲ್ಲಿ ನೋಡಬಹುದು.

Add a comment

*Please complete all fields correctly

SIMILAR STORIES

Posted by admin | 12 July 2017
Few colorful photos of one of the wonders of world and some thoughts! It was just one evening visit to Taj and I was awestruck by its beauty like anyone...
Posted by admin | 21 March 2017
Finally I was able to finish some decent amount of work  under my portfolio page. But note that it is still being built so I may call this as under”...
Posted by admin | 05 March 2017
Koodalasangama, one of the important pilgrimage of North Karnataka can be best captured only in Panoramas. I used my phone to capture these photos which show a magical morning I...