ನೀರು :

ನೆಲವನ್ನು ಕತ್ತರಿಸಿದೆವು. ಮರಗಿಡಗಳನ್ನು ಕೊಂದೆವು .ಜೀವಿಗಳ ಉಸಿರು ಕಸಿದೆವು.ಈಗ ನಮ್ಮ ಒಡಲು ಹೆಣಗಳ ರಾಶಿ.

ಕೆಲವು ಹೆಣಗಳಿನ್ನೂ ಸತ್ತಿಲ್ಲ . ಮೌನವನ್ನೇ ಕೂಗುತ್ತಿವೆ. ಗಟ್ಟಿಯಾಗಿ ನಿಂತಿವೆ. 

ತಲೆಎತ್ತಿ ಕೆಲವು ಇಣುಕಿದರೆ , ಕೆಲವು ಮುಳುಗೇಳುತ್ತ ರೋದಿಸುತ್ತವೆ.

ಸಂತೈಸುವವರಿಗಾಗಿ ಕಾದಿವೆ. 

ಮೋಡ :

ನಿನ್ನೆ ತಾನೇ ಅಪ್ಪ ದೊಡ್ದಪ್ಪರನ್ನ ನೀರು ಬೇಕೇ ಅಂದು ಕೇಳಿದ್ದೆ .ಇಂದು ನೀರಿನಲ್ಲೇ ನಿಂತಿದ್ದಾರೆ !ಮಾತನಾಡುತ್ತಿಲ್ಲ .

ಬದಲಾಗಿದ್ದಾರೆ . ಬಣ್ಣ ಕಳೆದುಕೊಂಡಿದ್ದಾರೆ .ಮನೆಯ ಮಕ್ಕಳೆಲ್ಲ ಎಲ್ಲಿ ಹೋದರು ?

ಯಾರೂ ಕಾಣುತ್ತಿಲ್ಲವಲ್ಲ. ಒಮ್ಮೆ  ಮಾತನಾಡಿಸಿ ನೋಡಲೇ ?
ನೀರಿನಲ್ಲಿದ್ದರು ನೀರನ್ನೇ ಚಾಚುತ್ತಿದ್ದಾರಲ್ಲ !

ಬಣ್ಣಗಳು  :

ಹಸಿರು ನಮ್ಮ ಒಡೆಯನಾಗಿದ್ದ ಕೆಂಪಲ್ಲ. ಕೆಂಪನ್ನ ಕಂಡರೆ ನಮಗೆ ಭಯ. ಕಪ್ಪು ಇನ್ನೂ ಭೀಭತ್ಸ . ಕಪ್ಪು ಕಾಯುತ್ತಿದ್ದಾನೆ ಕೆಂಪನ್ನ ಬೀಳಿಸಲು .

ಈ ರಾಜಕೀಯ ನಮಗೆ ಆಗದು . ನಮಗೆ ನಮ್ಮ ನಿನ್ನೆಯ ದಿನಗಳು ಬೇಕು . ಹಸಿರು ಒಡೆಯನಾಗಿರಬೇಕು.

ಆಗ ಮಾತ್ರ ಕೆಂಪು , ಕಪ್ಪು ಎಲ್ಲರು ಸಮಾನತೆಯಿಂದ , ಶಾಂತಿಯಿಂದ ಇರುತ್ತಾರೆ.

ಮರ :

ಅಪ್ಪ , ಅಮ್ಮ , ಅಣ್ಣ ,ತಮ್ಮ ,ತಂಗಿ , ಅಕ್ಕ ಎಲ್ಲರನ್ನು ಕಳಕೊಂಡೆ .ಎಲ್ಲವನ್ನು ಕಳಕೊಂಡೆ.

ಉಳಿದವರು ನಾವು ಸ್ವಲ್ಪವೇ ಸ್ವಲ್ಪ. ಎಲ್ಲೋ ಅಲ್ಲಿ, ಇಲ್ಲಿ, ತುದಿಯಲ್ಲಿ .

ಕೆಳಗೆ ನೋಡಿದರೆ  ಬಂಧುಗಳ ಹೆಣಗಳೆಲ್ಲ ನಮ್ಮನ್ನು ಕಿಕ್ಕಿರಿದು ನೋಡುತ್ತಿದೆ.

ಅಪ್ಪ ಅಮ್ಮ ಇನ್ನೂ  ಜೀವಿಸುವ ಆಸೆ ಇರುವಂತೆ ನಿಂತೇ ಇದ್ದಾರೆ. ನಮ್ಮನ್ನೇ ನೋಡುತ್ತಿದ್ದಾರೆ.

ಅಲ್ಲ , ನಮಗೆ ಹಾಗನಿಸುತ್ತಿದೆ .

ನೆಲ:

ಅಯ್ಯೋ , ಎಷ್ಟು ಸುಂದರವಾಗಿದ್ದ  ಕುಟುಂಬ ಹೇಗಾಗೊಯ್ತು ! ಹಚ್ಚ ಹಸುರಿನ ನೆಲಗಳು ಕೊಳೆತು ಸ್ಮಶಾನವಾಯಿತು. 

ಆದರೆ ನಾನು ಇನ್ನೂ ಏನೇನೋ ನೋಡಿದ್ದೇನೆ . ಆ ದಿನ ಹೇಗೆ ಮರೆಯುವೆ ನಾನು ! ನೀರು ಎಲ್ಲೆಡೆಯೂ ನುಗ್ಗಿದ ದಿನ. ಪ್ರಾಣಿ-ಪಕ್ಷಿ ಸಂಕುಲಗಳು , ಸರೀಸೃಪಗಳು,ಕೀಟಗಳು ಹೀಗೆ ಎಷ್ಟೋ ಜೀವಿಗಳು ಒದ್ದಾಡಿ  ಉಸಿರುಗಟ್ಟಿ ಸತ್ತವು . ಅದೆಷ್ಟೋ ಜೀವಿಗಳ ಮನೆಗಳು ನಿರ್ನಾಮವಾಗಿ ಹೋದವು .

ನನ್ನ ಬಾಹುಗಳಲ್ಲೇ ಎಲ್ಲರು ಕೊಳೆತು ನಾಶವಾದರು. ಈ ಎಲ್ಲರ ನೋವುಗಳ ನೆನಪು ಇನ್ನು ಬೆಳೆಯುತ್ತಿದೆ.

ಈ ಚಿತ್ರಗಳನ್ನು ಶರಾವತಿ ಹಿನ್ನೀರಿನ ಜಾಗಗಳಲ್ಲಿ ತೆಗೆದಿದ್ದೇನೆ . ಎಷ್ಟೇ ಸುಂದರ ಅನಿಸಿದರೂ ಮನಸ್ಸಿನ ಒಂದು ಮೂಲೆಯಲ್ಲಿ ಇವೆಲ್ಲ ಮನುಷ್ಯನ ಬಯಕೆಗಳಿಗೆ ನಾಶವಾಗಿವೆ , ಮಾರ್ಪಾಡಾಗಿವೆ ಎಂದೆನಿಸಿಬಿಡುತ್ತದೆ. ಸತ್ತ ಮರಗಳು ಸಂಜೆಯ ಹೊಂಬೆಳಕಿನಲ್ಲಿ  ಮಿರಿ ಮಿರಿ ಬೆಳಗುವಾಗ ಸಿಗುವ ಅನುಭೂತಿ ಯಾವುದೋ ಒಂದು ಅಪರಾಧಿತ್ವಭಾವದಲ್ಲಿ ಸಿಲುಕಿಕೊಂಡು ನರಳುತ್ತದೆ.  ತಂಪಾದ ಹಿನ್ನೀರಿನಲ್ಲಿ ಈಜುವಾಗ   ಸಿಗುವ ಆನಂದ  ನೀರಿನಲ್ಲಿದ್ದ ಸತ್ತ ಮರಗಳಲ್ಲಿ ತಾತ್ಕಾಲಿಕವಾಗಿ ಆಶ್ರಯಿಸಿದಾಗ ಕರಗಿ  ಹೋಗುತ್ತವೆ . ಹಾಗಾಗಿ ನಾನು ಎಷ್ಟೇ ಸುಂದರವಾಗಿ ಚಿತ್ರ ತೆಗೆದರೂ     ಒಂದು ಅಪರಾಧಿ ಮನೋಭಾವದಲ್ಲಿ  ಪ್ರಸ್ತುತ ಪಡಿಸುವ ಪ್ರಯತ್ನ ಇಲ್ಲಿ ಮಾಡಿದ್ದೇನೆ. ಅದೇ  ಸಮಯದಲ್ಲಿ   ನಿಮಗೂ ಆ ಪ್ರಜ್ಞೆ  ಕಾಡಿದರೆ ನನ್ನನ್ನು ಕ್ಷಮಿಸಿಬಿಡಿ .

ಮಾನವ ಗರ್ವದಿಂದ ಪರಿಸರವನ್ನು ಎಷ್ಟೇ ವಿರೂಪಗೊಳಿಸಿದರೂ ಪರಿಸರ ತುಂಬಾ ದೊಡ್ಡದು. ಪರಿಸರ ಸ್ವಲ್ಪವೇ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿತು ಅಂದರೆ ಮನುಷ್ಯ ಸಂಕುಲವೇ ನಾಶವಾಗಿ ಹೋಗಬಹುದು. ಅಲ್ಲದೆ ಮಾರ್ಪಾಡುಗಳು ಪರಿಸರದ ಒಂದು  ಸಾಮಾನ್ಯ ಲಕ್ಷಣ. ಪರಿಸರ ಲಕ್ಷಗಟ್ಟಲೆ ವರ್ಷದಿಂದ ಮರ್ಪಾಡಾಗುತ್ತಲೇ ಇದೆ. ಜೀವಿಗಳು ಹುಟ್ಟುತ್ತಲೇ ಇವೆ ಮತ್ತು ನಶಿಸಿ ಹೋಗುತ್ತಲೇ ಇವೆ. ಮನುಷ್ಯ ಸಮಯವೆಂಬ ಅನಂತತೆಯಲ್ಲಿ ಒಂದು ಸಣ್ಣ ಚುಕ್ಕಿ ಅಷ್ಟೇ.

ಮೇಲಿರುವ ಭಯಾನಕ ಚಿತ್ರ ಜೋರ್ಜ್ ಮಿಲ್ಲರ್  ನಿರ್ದೇಶನದ  Mad Max: Fury Road ಎಂಬ ಆಂಗ್ಲ ಭಾಷೆಯ ಚಲನಚಿತ್ರದಿಂದ ತೆಗೆದುಕೊಂಡಿದ್ದು . ಮಹಾಯುದ್ದವೊಂದು  ಭೂಮಿಯಲ್ಲಿನ ನಾಗರಿಕತೆಯನ್ನು ಕೊನೆಗೊಳಿಸುತ್ತದೆ. ಅತಿಯಾದ ಪರಮಾಣು ಅಸ್ತ್ರದ ಬಳಕೆ ಪರಿಸರವನ್ನು ಸಂಪೂರ್ಣ ನಾಶಗೊಳಿಸಿರುತ್ತದೆ. ಉಳಿದ ಕೆಲವೇ ಕೆಲವು ಮನುಷ್ಯ ಪಂಗಡಗಳು ಅಸ್ತಿತ್ವಕ್ಕೆ ಹೋರಾಡುತ್ತಿರುತ್ತಾರೆ . ಅಂತಹ ದಿನಗಳಲ್ಲಿ ಬದುಕು  ಹೇಗಿರಬಹುದು ಎಂಬುದನ್ನು ಈ ಚಲನಚಿತ್ರ ತುಂಬಾ ಅದ್ಭುತವಾಗಿ ದೃಶ್ಯೀಕರಿಸಲಾಗಿದೆ. ಪ್ರತಿಯೊಬ್ಬರೂ ಈ ಚಲನಚಿತ್ರವನ್ನು ನೋಡಲೇಬೇಕು . ಇಲ್ಲಿ ಯಾಕೆ ಅದನ್ನ ಉಲ್ಲೇಖಿಸಿದ್ದು ಎನ್ನುವುದು ಅವರವರ ಊಹೆಗೆ ಬಿಟ್ಟಿದ್ದು .

 

ಈ ರೀತಿಯ ಬರಹಗಳು ಸಮಂಜಸವೇ ನಂಗೆ ತಿಳಿಯದು . ಹಾಗಾಗಿ ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ತಿಳಿಸಿ ಮತ್ತು ಶೇರ್ ಮಾಡಿ 🙂

 

ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 


Dinesh Maneer

Photographer. Writer .Trekker.Traveler.Businessman based out of Karnataka, India

All author posts

Privacy Preference Center